ಅನುಭೋಗ ಹಕ್ಕು ಮತ್ತು ಅನುಜ್ಞೆ
 
ಸ್ಥಿರಾಸ್ತಿಯ (ಭೂಮಿ, ಮನೆ ಮುಂತಾದವು) ಮಾಲೀಕ ಅಥವಾ ಅನುಭವದಾರ ತನ್ನ ಆಸ್ತಿಯ ಲಾಭದಾಯಕ ಉಪಯೋಗಕ್ಕಾಗಿ ಸೌಕರ್ಯಕ್ಕಾಗಿ ಮತ್ತೊಬ್ಬನ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ವ್ಯವಹಾರ ನಡೆಸಲು ಹಾಗೂ ನಡೆಸಿಕೊಂಡು ಬರಲು ಅಥವಾ ವ್ಯವಹಾರ ನಡೆಯದಂತೆ ತಡೆಹಿಡಿದು ಆಸ್ತಿಯನ್ನು ಅನುಭೋಗಿಸುವ ಹಕ್ಕಿಗೆ ಅನುಭೋಗ ಹಕ್ಕು (ದಿ ಲಾ ರಿಲೇಟಿಂಗ್ ಟು ಈಸ್ó ಮೆಂಟ್ಸ್ ಅಂಡ್ ಲೈಸೆನ್ಸಸ್) ಎಂದು ಹೆಸರಿದೆ.
 
ಅನುಭೋಗಹಕ್ಕು ಮತ್ತು ಅನುಜ್ಞೆಗೆ ಸಂಬಂಧಪಟ್ಟ ಕಾಯಿದೆಯಲ್ಲಿರುವ (ದಿ ಇಂಡಿಯನ್ ಈಸ್ó ಮೆಂಟ್ಸ್ ಆ್ಯಕ್ಟ್) ನಿಯಮಗಳು ಇಲ್ಲವೆ ಅದರಲ್ಲಿ ಅಡಕವಾಗಿರುವ ತತ್ತ್ವಗಳು ಸಾಧಾರಣವಾಗಿ ಭಾರತದ ಎಲ್ಲ ಭಾಗಗಳಿಗೂ ಅನ್ವಯಿಸುತ್ತವೆ.

ಅನುಭೋಗಹಕ್ಕಿಗೆ ಕೆಲವು ವಿಶಿಷ್ಟ ಲಕ್ಷಣಗಳಿವೆ. 1. ಹಕ್ಕುಳ್ಳ ಆಸ್ತಿ ಮತ್ತು ಹಕ್ಕಿಗೆ ಅಧೀನವಾದ ಆಸ್ತಿ ಎಂದು ಎರಡು ಬಗೆ. ಅನುಭೋಗಹಕ್ಕುಳ್ಳ ಆಸ್ತಿದಾರ ಮತ್ತು ಹಕ್ಕಿಗೆ ಒಳಪಟ್ಟ ಆಸ್ತಿದಾರ ಬೇರೆ ಬೇರೆಯವರಾಗಿರುತ್ತಾರೆ. 2. ಹಕ್ಕು ಆಸ್ತಿಯ ಅಂಗ, ಆಸ್ತಿಯ ಒಡೆತನಕ್ಕೆ ಅಂಟಿಕೊಂಡು ಹಸ್ತಾಂತರವಾಗುತ್ತ ಹೋಗುವುದಲ್ಲದೆ ಅದರಿಂದ ಪ್ರತ್ಯೇಕಿಸಲ್ಪಟ್ಟು ವ್ಯಕ್ತಿಗತವಾಗುವುದಿಲ್ಲ. 3. ಹಕ್ಕುಳ್ಳ ಆಸ್ತಿಯನ್ನು ಸತ್ತ್ವಪೂರ್ಣವಾಗಿ ಉಪಯೋಗಿಸಿಕೊಳ್ಳಲು ಹಕ್ಕು ಅನುಕೂಲವಾಗಿರುತ್ತದೆ. 

ಇವುಗಳಲ್ಲಿ ಮೂರನೆಯ ಗುಣದ ವಿಶಿಷ್ಟ ಲಕ್ಷಣವೆಂದರೆ, ಹಕ್ಕುಳ್ಳ ಆಸ್ತಿಗೂ ಹಕ್ಕಿಗೆ ಒಳಪಟ್ಟ ಆಸ್ತಿಗೂ ಭೂಮಿಯ ಸಂಬಂಧವಿರಬೇಕು. ಅನುಭೋಗ ಹಕ್ಕು ಹಕ್ಕುಳ್ಳ ಆಸ್ತಿಗೆ ಸಂಬಂಧಿಸಿರಬೇಕಲ್ಲದೆ, ಆ ಆಸ್ತಿಯನ್ನು ಸ್ವಾಭಾವಿಕವಾಗಿ ಉಪಯೋಗಿಸಿಕೊಳ್ಳುವಂತಿರಬೇಕು. ಮತ್ತೊಬ್ಬನ ಆಸ್ತಿಯ ಮೇಲೆ ಅನುಭವಿಸುವ ಎಲ್ಲ ಹಕ್ಕುಗಳೂ ಅನುಭೋಗಹಕ್ಕುಗಳಾಗುವುದಿಲ್ಲ. ಅನುಭೋಗಹಕ್ಕಾಗಲು ಮೇಲೆ ತಿಳಿಸಿದ ಸಂಬಂಧ ಹಾಗೂ ಉಪಯುಕ್ತತೆ ಇರಬೇಕು. ಇಲ್ಲದಿದ್ದರೆ ಅವು ಕೇವಲ ಕರಾರಿನ ಹಕ್ಕುಗಳಾಗುತ್ತವೆ. ಇಂಥ ಸಂಬಂಧವಿದೆಯೆ ಇಲ್ಲವೆ ಎಂಬುದನ್ನು ವಾಸ್ತವಿಕವಾಗಿ ಪರಿಶೀಲಿಸಬೇಕು. ಹಕ್ಕುಳ್ಳ ಆಸ್ತಿಯ ಸ್ಥಿತಿ ಮತ್ತು ಹಕ್ಕಿನ ರೀತಿ ವ್ಯಾಪ್ತಿಗಳನ್ನು ಗಮನಿಸಬೇಕು.

ಎ ಎಂಬ ಆಸ್ತಿದಾರ ಬಿ ಎಂಬುವನ ಆಸ್ತಿಯ ಮೇಲೆ ಹೋಗಿ, ಅಲ್ಲಿರುವ ಒಂದು ಬಾವಿಯಿಂದ ನೀರನ್ನು ತರುವ ಹಕ್ಕು ಅನುಭೋಗದ ಹಕ್ಕು. ಎಗೆ ತಾನು ಹೋಗಿಬರುವ ಬಿಯ ಆಸ್ತಿಯ ಮೇಲೆ ಮಾಲೀಕತ್ವವಿರುವುದಿಲ್ಲ. ಹೋಗಿ ನೀರು ತರುವ ವಿಶೇಷಾಧಿಕರವಿರುತ್ತದೆ.

ಅನುಭೋಗ ಹಕ್ಕುಗಳನ್ನು ಪಡೆಯಲು 5 ವಿಧಾನಗಳಿವೆ. 1. ಅನುಮತಿಸಿ ಹಕ್ಕನ್ನು ಕೊಡುವುದು (ಗ್ರಾಂಟ್); 2. ತಾನು ಯಾವ ಹಕ್ಕನ್ನೂ ಚಲಾಯಿಸುವುದಿಲ್ಲವೆಂದು ಒಪ್ಪಿಕೊಳ್ಳುವುದು (ಕಾವನೆಂಟ್); 3. ಆಸ್ತಿಯ ಪರಭಾರೆಯಿಂದ; 4. ಸ್ವಾಧೀನಾನುಭವದ ಮೂಲಕ; 5. ಪದ್ಧತಿ ಪ್ರಕಾರ.

ಮುಖ್ಯವಾದ ಗಾಳಿ, ಬೆಳಕಿಗೆ ಸಂಬಂಧಪಟ್ಟ ಅನುಭೋಗಹಕ್ಕನ್ನು ಸ್ವಾಧೀನಾನುಭವದ ಮೂಲಕ ಪಡೆಯಬಹುದು. ಗಾಳಿ ಬೆಳಕನ್ನು ಇಪ್ಪತ್ತು ವರ್ಷಗಳ ಕಾಲ, ಅವಿಚ್ಛಿನ್ನವಾಗಿ ಅನುಭೋಗಹಕ್ಕೆಂದು ತಿಳಿದು, ಯಾವ ಅಡ್ಡಿಯೂ ಇಲ್ಲದೆ, ನೆಮ್ಮದಿಯಿಂದ ಅನುಭವಿಸಿದ್ದರೆ, ಆಗ ಗಾಳಿ ಬೆಳಕನ್ನು ಪಡೆಯುವ ಹಕ್ಕು ಅನುಭೋಗ ಹಕ್ಕಾಗುತ್ತದೆ.

ಅನುಭೋಗದ ವ್ಯಾಪ್ತಿಯ ಬಗ್ಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಅನುಭೋಗದ ಹಕ್ಕನ್ನು ನಿಯಮಿತ ಉದ್ದೇಶಕ್ಕಲ್ಲದೆ ಮಿಕ್ಕಾವ ಉದ್ದೇಶಕ್ಕೂ ಉಪಯೋಗಿಸಬಾರದು. ಹಕ್ಕುಳ್ಳ ಆಸ್ತಿದಾರ ಹಕ್ಕಿಗೆ ಸಂಬಂಧಪಟ್ಟ ಆಸ್ತಿಯ ಮಾಲೀಕನಿಗೆ ಕನಿಷ್ಠಹೊರೆಯಾಗುವಂತೆ ತನ್ನ ಹಕ್ಕನ್ನು ಚಲಾಯಿಸಬೇಕು. ಹಲವು ನಿಯಮಿತ ಸಂದರ್ಭಗಳಲ್ಲಿ ಮಾತ್ರ ಹಕ್ಕುಳ್ಳ ಆಸ್ತಿದಾರ ತಾನು ಉಪಯೋಗಿಸುವ ರೀತಿ ಮತ್ತು ಸ್ಥಳವನ್ನು ವ್ಯತ್ಯಾಸ ಮಾಡಬಹುದು. ತನ್ನ ಹಕ್ಕನ್ನು ಸತ್ತ್ವಪೂರ್ಣವಾಗಿ ಮಾಡಿಕೊಳ್ಳಲು, ಆತ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಬಹುದು. ಆದರೆ, ಅವು ಹಕ್ಕಿಗೊಳಪಟ್ಟ ಆಸ್ತಿದಾರನಿಗೆ ಬಾಧಕವಾಗಿರಬಾರದು. ಹಕ್ಕಿಗೊಳಪಟ್ಟ ಆಸ್ತಿದಾರ ತನ್ನ ಇಚ್ಚಾನುಸಾರ ತನ್ನ ಆಸ್ತಿಯನ್ನು ಉಪಯೋಗಿಸಬಹುದು. ಆದರೆ, ಅನುಭೋಗದ ಹಕ್ಕಿನ ಮೇಲೆ ನಿಬಂಧನೆಗಳನ್ನು ವಿಧಿಸುವಂತಿಲ್ಲ. ಆ ಹಕ್ಕು ಸಂಕುಚಿತಗೊಳ್ಳುವಂತೆ ನಡೆದುಕೊಳ್ಳಬಾರದು.

ಅನುಜ್ಞೆ : ಇದು ಒಂದು ವೈಯಕ್ತಿಕ ಹಕ್ಕು. ಒಬ್ಬ ಮತ್ತೊಬ್ಬನಿಗೆ ತನ್ನ ಸ್ಥಿರಾಸ್ತಿಯ ಮೇಲೆ ಯಾವುದಾದರೊಂದು ಕೆಲಸ ಮಾಡಲು ಅನುಮತಿಸಿ ಕೊಡುವ ಹಕ್ಕಿಗೆ ಈ ಹೆಸರಿದೆ (ಸನ್ನದು, ಅನುಮತಿ, ಲೈಸನ್ಸ್) ಅಂದರೆ, ಹಾಗೆ ಅನುಜ್ಞೆ ಪಡೆಯದಿದ್ದರೆ, ಆ ಕೆಲಸ ಸಿವಿಲ್ ಕಾನೂನುಬದ್ಧವಾಗಿರುವುದಿಲ್ಲ. ಅನುಜ್ಞೆ ಕೊಡುವಾತನ ಮೇಲೆ ಹಕ್ಕುಬಾದ್ಯತೆಗಳೇನಿರುವುದಿಲ್ಲ. ಅವನು ಅದನ್ನು ಕಾಯಿದೆಯ ಹಲವು ನಿಯಮಗಳಿಗನುಗುಣವಾಗಿ ತನ್ನ ಇಚ್ಛಾನುಸಾರ ರದ್ದು ಮಾಡಬಹುದು. ಹಾಗೆ ರದ್ದು ಮಾಡುವಾಗ ಪೂರ್ವಭಾವಿಯಾಗಿ ತಿಳಿವಳಿಕೆ (ನೋಟಿಸ್) ಕೊಡಬೇಕು.							
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ